ಜ್ಯೇಷ್ಠಾಧಿಕಾರ -
	ಉತ್ತರಾಧಿಕಾರಕ್ಕೆ ಸಂಬಂಧಿಸಿದಂತೆ ಜ್ಯೇಷ್ಠಪುತ್ರನಿಗೆ ಮತ್ತು ಅವನ ಸಂತಾನಕ್ಕೆ (ಇಷ್ಯೂ), ಇಲ್ಲವೇ-ಅಪವಾದಾತ್ಮಕ ಸಂದರ್ಭಗಳಲ್ಲಿ-ಜ್ಯೇಷ್ಠಪುತ್ರಿಯ ಸಂತತಿಗೆ (ಲೈನ್) ನ್ಯಾಯ, ಪದ್ಧತಿ ಅಥವಾ ವಾಡಿಕೆಯಿಂದ-ಲಭ್ಯವಾಗಿರುವ ಅಧಿಮಾನ್ಯತೆ (ಪ್ರೆಫರೆನ್ಸ್) (ಪ್ರೈಮೊಜೆನಿಟ್ಯುರ್). ಹಿರಿಯ ಮಗನಿಗೆ ಅಥವಾ ಹಿರಿಯ ಅಣ್ಣನಿಗೆ ಲಭ್ಯವಿರುವ ಈ ಹಕ್ಕು ಉಳಿದವರ ಹಕ್ಕಿಗಿಂತ ಭಿನ್ನವಾದ್ದು. ತಂದೆಯ ಜೀವಿತಕಾಲದಲ್ಲಿ ಅಥವಾ ಮರಣಾನಂತರ ಆತನ ಹಾಗೂ ಪಿತ್ರಾರ್ಜಿತವಾದ ಎಲ್ಲ ಸ್ವತ್ತಾಗಲಿ, ಅದರ ಬಹುಭಾಗವಾಗಲಿ ಹಿರಿಯ ಮಗನಿಗೇ ದೊರೆಯಬೇಕೆಂಬ ಹಕ್ಕು ಇದು. ಹಿರಿಯನನ್ನು ಪಟ್ಟೇದಾರನೆಂದೂ ಇತರರನ್ನು ಸಿಕ್ಮೀದಾರರೆಂದೂ ಪರಿಗಣಿಸುವ ನ್ಯಾಯಸೂತ್ರಗಳು ಜ್ಯೇಷ್ಠಾಧಿಕಾರದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಏಕೆಂದರೆ ಪಟ್ಟೇದಾರ ಮತ್ತು ಸಿಕ್ಮೀದಾರನ ನಡುವೆ ಆಗುವ ಸ್ವತ್ತಿನ ವಿಭಜನೆಯನ್ನು ಅವರೆಲ್ಲರೂ ಸಮಾನರೆಂಬ ಆಧಾರದ ಮೇಲೆ ಮಾಡಲಾಗುವುದು. ಅಲ್ಲದೆ ಅವರವರ ಪಾಲಿಗೆ ಬಂದ ಸ್ವತ್ತಿನ ಮೇಲೆ ಅವರವರಿಗೆ ಇರುವ ಸ್ವಾಮ್ಯಾಧಿಕಾರಗಳಲ್ಲಿ ವ್ಯತ್ಯಾಸವಿರುವುದಿಲ್ಲ.

	ಜ್ಯೇಷ್ಠಾಧಿಕಾರ ಅತ್ಯಂತ ಪ್ರಾಚೀನ ಕಾಲದಲ್ಲಿ, ಎಂದರೆ ಮಾನವ ಗುಂಪುಜೀವಿಯಾಗಿದ್ದಾಗ, ಅಸ್ತಿತ್ವಕ್ಕೆ ಬಂದಿರಬೇಕೆಂದೂ ಅವನು ಕುಟುಂಬಜೀವಿಯಾದಮೇಲೆ ಉತ್ತರಾಧಿಕಾರದ ನಿಯಮಗಳ ಸ್ವರೂಪವನ್ನು ತಾಳಿರಬೇಕೆಂದೂ ಕೆಲವರು ಅಭಿಪ್ರಾಯಪಡುತ್ತಾರೆ. ಮುಂದೆ, ಸಮಾಜದಲ್ಲಿ ಸುಧಾರಣೆಯಾದಾಗ, ಎಲ್ಲ ಮಕ್ಕಳಿಗೆ ಕುಟುಂಬದ ಆಸ್ತಿ ಸಲ್ಲಬೇಕು ಎಂಬ ನಿಯಮಗಳು ಆಚರಣೆಗೆ ಬಂದಿರಬೇಕು. ವಿಶ್ವದ ಅನೇಕ ದೇಶಗಳ ಪ್ರಾಚೀನ ಇತಿಹಾಸದಲ್ಲಿ ಈ ಊಹೆಗೆ ಪುಷ್ಟಿ ದೊರೆಯುತ್ತದೆ.

	ಪ್ರಾಚೀನ ಭಾರತದ ಉತ್ತರಾಧಿಕಾರದ ಸಾಮಾನ್ಯ ನಿಯಮಗಳಲ್ಲಿ ಜ್ಯೇಷ್ಠಾಧಿಕಾರದ ಪ್ರಕಾರಗಳನ್ನು ಕಾಣಬಹುದು. ಜ್ಯೇಷ್ಠಾಂಶವನ್ನು ಜ್ಯೇಷ್ಠಾಧಿಕಾರದ ಒಂದು ರೂಪವೆನ್ನಬಹುದು. ಕೌಟಿಲ್ಯನ ಕಾಲದಲ್ಲಿ ರಾಜರ ಮತ್ತು ಸಾಮಂತರ ಮನೆತನಗಳಲ್ಲಿ ಜ್ಯೇಷ್ಠಾಧಿಕಾರ ಪದ್ಧತಿಯೂ ಸಾಮಾನ್ಯರ ಕೆಲವು ವರ್ಗಗಳಲ್ಲಿ ಜ್ಯೇಷ್ಠಾಂಶ ಪದ್ಧತಿಯೂ ಇದ್ದಂತೆ ತಿಳಿದುಬರುತ್ತದೆ. ಅನಂತರದ ಕಾಲದಿಂದ ಜ್ಯೇಷ್ಠಾಧಿಕಾರ ಪದ್ಧತಿ ಕೇವಲ ರಾಜಮನೆತನಗಳಲ್ಲಿ ಉಳಿದುಕೊಂಡು ಬಂದಿದೆ. ಕೆಲವು ಮನೆತನಗಳಲ್ಲಿ ದಪ್ಪಪಾಲು (ಸ್ವತ್ತಿನ ವಿಭಜನೆಯ ಕಾಲಕ್ಕೆ ಹಿರಿಯನಿಗೆ ಕೊಡುವ ಹೆಚ್ಚಿನ ಭಾಗ) ಕೊಡುವ ರೂಢಿ ಈಗಲೂ ಉಂಟು. ರೂಢಿಗೆ ಈಗ ಕಾನೂನು ಮಾನ್ಯತೆಯಿಲ್ಲ. ದಪ್ಟಪಾಲು ಜ್ಯೇಷ್ಠಾಧಿಕಾರದ ಒಂದು ರೂಪ.

	ಇಸ್ಲಾಮೀ ನ್ಯಾಯ ಜ್ಯೇಷ್ಠಾಧಿಕಾರವನ್ನು ಒಪ್ಪುವುದಿಲ್ಲ. ದೊರೆಗಳು ವಂಶ ಪಾರಂಪರ್ಯವಾಗಿ ಆಡಳಿತ ನಡೆಸಬೇಕೆಂಬುದು ಧರ್ಮಬಾಹಿರವಾದದ್ದು. ಆದರೂ ರಾಜಮನೆತನಗಳಲ್ಲಿ ರೂಢಿಗತವಾಗಿ ಜ್ಯೇಷ್ಠಾಧಿಕಾರ ಉಳಿದುಕೊಂಡು ಬಂದಿದೆ.

	ಇಂಗ್ಲೆಂಡಿನಲ್ಲಿ ರಾಜಮನೆತನಗಳಲ್ಲಿ ಮಾತ್ರವಲ್ಲದೆ ಲಾರ್ಡ್ ಮುಂತಾದ ಶ್ರೀಮಂತ ಮನೆತನಗಳಲ್ಲೂ ಜ್ಯೇಷ್ಠಾಧಿಕಾರ ಆಚರಣೆಯಲ್ಲಿತ್ತು. ಪಿತ್ರಾರ್ಜಿತ ಸ್ವತ್ತು ಹಿರಿಯ ಮಗನಿಗೆ ಸೇರುತ್ತಿತ್ತು. ಉಳಿದ ಮಕ್ಕಳು ಜೀವನಾಂಶಕ್ಕೆ ಅರ್ಹರಾಗಿರುತ್ತಿದ್ದರು. ರಾಜ್ಯಸಂರಕ್ಷಣೆ ಮತ್ತು ಯುದ್ಧಸನ್ನದ್ಧತೆಗಳ ದೃಷ್ಟಿಯಿಂದ ಜ್ಯೇಷ್ಠಾಧಿಕಾರ ಪದ್ಧತಿ ವಿಹಿತವಾದ್ದೆಂಬುದು ಇದನ್ನು ಸಮರ್ಥಿಸುತ್ತಿದ್ದವರವಾದ. ಮುಂದೆ ಈ ಪದ್ಧತಿ ನಶಿಸುತ್ತ ಬಂತು. ಜ್ಯೇಷ್ಠಾಧಿಕಾರ ಈಗ ಅಪರೂಪ.

	ಹಿಂದಿನ ಕಾಲದಲ್ಲಿ ಅನೇಕ ದೇಶಗಳ ನ್ಯಾಯ ವ್ಯವಸ್ಥೆಗಳಲ್ಲಿ ಜ್ಯೇಷ್ಠಾಧಿಕಾರದ ನಾನಾ ರೀತಿಗಳು ಆಚರಣೆಯಲ್ಲಿದ್ದವು. ಇಂಗ್ಲೆಂಡಿನಲ್ಲಿ ಅಂತಿಮ ಇಷ್ಟಪತ್ರ ಬರೆದಿಡದೆ ಸತ್ತವನ ಜಮೀನಿನ ಮೇಲೆ ಉತ್ತರಾಧಿಕಾರವನ್ನು ನಿರ್ಣಯಿಸುವಾಗ ಜ್ಯೇಷ್ಠಾಧಿಕಾರದ ನಿಯಮವನ್ನು 1925ರವರೆಗೆ ಅನ್ವಯಿಸಲಾಗುತ್ತಿತ್ತು.				 		 (ಎಲ್.ಎಸ್.ಜೆ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ